ಮಠಗಳು - 
	ಮಠ ಎಂಬ ಪದಕ್ಕೆ ಇರುವ ಮೂಲ ಅರ್ಥ ಸಂನ್ಯಾಸಿಗಳು ವಾಸಿಸುವ ಕುಟೀರ. ಇದು ತಪಸ್ಸಿನ ಜ್ಞಾನಾನ್ವೇಷಣೆಯ ಧಾರ್ಮಿಕ ಕೇಂದ್ರ. ಕ್ರಮೇಣ ಅಶ್ರಮ. ಗುರುಮನೆ, ಗುರುಕುಲಗಳಾಗಿ ಕಾಲ ಉರುಳಿದಂತೆ ಇದು ವಿದ್ಯಾಪ್ರಸಾರ, ಜ್ಞಾನಪ್ರಸಾರ, ಮತಪ್ರಸಾರ ಕೇಂದ್ರಗಳಾಗಿ ಬೆಳೆದಿವೆ. 

	ಕರ್ನಾಟಕದ ಇತಿಹಾಸದಲ್ಲಿ ಈ ಮಠಗಳ ಬೆಳೆವಣಿಗೆಯನ್ನು ಗುರುತಿಸುವ ಪ್ರಯತ್ನಗಳು ನಡೆದಿಲ್ಲ. ಭಾರತದಲ್ಲಿ ಕ್ರಿ.ಪೂ. ಐದನೆಯ ಶತಮಾನದಷ್ಟು ಪುರಾತನಕಾಲದಲ್ಲಿ ಗುರುಕುಲಗಳಿದ್ದವು. ರಾಮಾಯಣದಲ್ಲಿ ಕರ್ನಾಟಕದ ನಾನಾ ಸ್ಥಳಗಳಲ್ಲಿ ಋಷಿಮುನಿಗಳು ತಪಸ್ಸು ಮಾಡಿಕೊಂಡಿದ್ದರೆಂದು ತಿಳಿದು ಬರುತ್ತದೆ. ಇವುಗಳ ಜೊತೆಗೆ ಬೌದ್ಧವಿಹಾರಗಳು, ಸಂಘಾರಾಮಗಳು, ಜೈನವಸತಿಗಳೂ (ಬಸದಿ-ಬಸ್ತಿ) ಇದ್ದುವು. ಬೌದ್ಧ ಮತ್ತು ಜೈನದ ವಿಹಾರಗಳು ಸುಮಾರು ಇಂದಿನ ಮಠದ ಸ್ವರೂಪವನ್ನೇ ಹೊಂದಿದ್ದವು. ಕ್ರಿಸ್ತಶಕಾರಂಭದ ಅಸುಪಾಸಿನ ಶತಮಾನಗಳಲ್ಲಿ ಶ್ರವಣಬೆಳಗೊಳ ಜೈನಧಾರ್ಮಿಕ ಕೇಂದ್ರವಾಗಿತ್ತೆಂದು ಜೈನಗ್ರಂಥಗಳಿಂದಲೂ ಕ್ರಿ.ಪೂ. 3ನೆಯ ಶತಮಾನದಲ್ಲಿಯೇ ಅಶೋಕ ಮಹಿಷ ಮಂಡಲಕ್ಕೆ ಧರ್ಮ ಪ್ರಚಾರಕರನ್ನು ಕಳುಹಿಸಿದ್ದನೆಂದು ಬೌದ್ಧ ಮೂಲಗಳಿಂದಲೂ ತಿಳಿದುಬರುತ್ತದೆಯಾದ್ದರಿಂದ ಈ ಕಾಲದಲ್ಲಿ ಅವರ ವಿಹಾರ ಮಠಗಳು ಇದ್ದಿರಬೇಕೆಂದು ಊಹಿಸಬಹುದು. (ನೋಡಿ- ಜೈನಧರ್ಮ) 

(ನೋಡಿ- ಬೌದ್ಧ-ಧರ್ಮ)

	10-12ನೆಯ ಶತಮಾನಗಳಲ್ಲಿ ಪಾಶುಪತ ಶೈವಪಂಥದ ಅನೇಕ ದೇವಾಲಯ ಮಠಗಳು ಕರ್ನಾಟಕದ ನಾನಾ ಭಾಗಗಳಲ್ಲಿ ಹರಡಿದ್ದುದಕ್ಕೆ ಶಾಸನಾಧಾರಗಳಿವೆ. ಅವುಗಳಲ್ಲಿ ಬಹು ಪ್ರಸಿದ್ಧವಾದುದು ಬಳ್ಳಿಗಾವೆಯ ಕೋಡಿಯಮಠ.

(ನೋಡಿ- ಬೆಳಗಾಂವಿ)

	ಇಂದಿನ ಮಠಗಳ ಸ್ವರೂಪ ಹೆಚ್ಚು ಕಡಿಮೆ ಅನೂಚಾನವಾಗಿ ನಡೆದುಬಂದ ರೀತಿಯಲ್ಲೆ ಉಳಿದುಬಂದಿವೆ. ಪ್ರತಿ ಮಠಕ್ಕೂ ಒಬ್ಬ ಅಧಿಪತಿ. ಈತನಿಗೆ ಆಚಾರ್ಯ, ಕುಲಪತಿ, ಗುರು, ಜಗದ್ಗುರು, ಸ್ವಾಮಿ, ಯತಿ, ಯತೀಂದ್ರ, ದೇಶಿಕ, ದೇಶೀಕೇಂದ್ರ ಇತ್ಯಾದಿ ಹೆಸರುಗಳು ಇರುತ್ತವೆ. ಮಠಾಧಿಪತಿಗೆ ನಿಯತವಾದ ವೇಷಭೂಷಣಗಳುಂಟು. ಸಾಮಾನ್ಯವಾಗಿ ಕಾವಿ (ಕಷಾಯ) ವಸ್ತ್ರಧಾರಣೆ ಅನೇಕ ಪಂಥಗಳಲ್ಲಿ ವಾಡಿಕೆಯಾಗಿದೆ. ಹಳದಿ, ಕೇಸರಿ ಅಥವಾ ಶುದ್ಧ ಬಿಳಿಯ ವಸ್ತ್ರಗಳನ್ನು ಕೆಲವು ಪಂಥದವರು ಧರಿಸುತ್ತಾರೆ. ಮೊದಮೊದಲು ಬಟ್ಟೆಗೆ ಪ್ರಾಧಾನ್ಯವಿರಲಿಲ್ಲ. ದಿಗಂಬರ ಜೈನರಲ್ಲಿ ನಿಷ್ಠುರಪ್ರತಿಗಳಾದ ಮುನಿಗಳು ನಗ್ನಮೂರ್ತಿಗಳು. ಸ್ಮಾರ್ತ, ಶ್ರೀವೈಷ್ಣವ, ಮಾಧ್ವ ಮುಂತಾದ ಪಂಥಗಳಲ್ಲಿ ಉಡುವ ವಸ್ತ್ರ ಮಾತ್ರ ಉಂಟು; ಹೊರಸಂಚಾರದಲ್ಲಿ ಕೆಲವು ವೇಳೆ ಉತ್ತರೀಯ ಇರುತ್ತದೆ. ವೀರಶೈವದಲ್ಲಿ ಕೆಲವು ಮಠಗಳಲ್ಲಿ ಶಿರೋವೇಷ್ಟನ (ರುಮಾಲು), ಉದ್ದನೆಯ ನಿಲುವಂಗಿ ಕತ್ತಿನ ಸುತ್ತ ಕೆಳಗೆ ಇಳಿಬೀಳುವಂಥ ಉತ್ತರೀಯ, ಮೈಮೇಲೆ ನಿಲುವಂಗಿ ಇರುತ್ತವೆ. ಆಯಾಪಂಥಕ್ಕೆ ಅನುಗುಣವಾಗಿ ಮಾಮೂಲಾಗಿ ಹಣೆ, ಭುಜಗಳು, ಮುಂಗೈಗಳು, ಎದೆ ಮುಂತಾದ ಕಡೆ ಭಸ್ಮ, ತ್ರಿಪುಂಡ್ರ, ನಾಮ, ಗಂಧ, ಗಂಧದ ಮುದ್ರೆ, ತಿಲಕ ಇತ್ಯಾದಿಗಳನ್ನು ಲಾಂಛನಗಳಾಗಿ ಇಟ್ಟುಕೊಳ್ಳುತ್ತಾರೆ. ಕೊರಳಲ್ಲಿ ರುದ್ರಾಕ್ಷಿ, ಜಪಸರ, ಕಂಕುಳಲ್ಲಿ ಕೃಷ್ಣಾಜಿನ ಕೈಯ್ಯಲ್ಲಿ ಕಮಂಡಲು, ದಂಡ (ಆಷಾಡ). ಎಡಭುಜದ ಮೇಲಿಂದ ಬಲ ಮಗ್ಗುಲಿಗೆ ಬರುವಂಥ ಯಜ್ಞೋಪವೀತ ಅಥವಾ ಒಳಗಡೆ ಲಿಂಗವಿರುವ ಕರಡಿಗೆ, ಇಲ್ಲವೇ ಕೊರಳಿಗೆ, ಇಳಿ ಬಿಟ್ಟಂಥ ರುದ್ರಾಕ್ಷಿಮಾಲೆ, ಜಪಸರ ಅಥವಾ ಕರಡಿಗೆ ಇರುತ್ತವೆ. ಕಾಲಿಗೆ ಮರದ ಹಾವುಗೆ ಇರುವುದೂ ಉಂಟು. ಗುರುಗಳು ಭಕ್ತಾದಿಗಳಿಗೆ ದರ್ಶನ ಕೊಡಲು ಕುಳಿತುಕೊಳ್ಳುವ ಜಾಗ ಗುರುಪೀಠ. ಇದನ್ನು ಸಿಂಹಾಸನ, ಗಾದಿ ಎನ್ನುವುದೂ ಉಂಟು. ಅದರ ಮೇಲೆ ಜಿಂಕೆ ಅಥವಾ ಹುಲಿಯ ಚÀರ್ಮ, ಕಾವಿಯ ಅಥವಾ ಶುದ್ಧ ಬಿಳಿಯವಸ್ತ್ರ ಹಾಸಿರುತ್ತಾರೆ. ವಿಶೇಷ ಸಂದರ್ಭಗಳಲ್ಲಿ ಪೀಠಾರೂಢರಾದಾಗ ರತ್ನಖಚಿತ ಸುವರ್ಣ ಕಿರೀಟಗಳನ್ನು ಆದಿಚುಂಚನಗಿರಿ, ಚಿತ್ರದುರ್ಗ ಮುರುಘಾಮಠ, ಶೃಂಗೇರಿ, ರಂಭಾಪುರಿ ಮುಂತಾದ ಸ್ವಾಮಿಗಳು ಧರಿಸಿಕೊಂಡು ಜರತಾರಿ ಅಥವಾ ರೇಷ್ಮೆಯ ಉತ್ತರೀಯ ಹೊದಿಯುವುದುಂಟು. 

	ಪ್ರತಿಮಠದಲ್ಲೂ ಇಷ್ಟದೇವತಾಪೂಜೆ ಇರುತ್ತದೆ. ವೀರಶೈವಮಠಗಳಲ್ಲಿ ಹಿಂದಿನ ಗುರುಗಳ ಸಮಾಧಿ ಪೂಜೆಗೆ (ಗದ್ದುಗೆ) ಪ್ರಾಶಸ್ತ್ಯವಿದೆ. ವೈಷ್ಣವ ಪಂಥದ ಮೈಸೂರಿನ ಪರಕಾಲಮಠ, ಉಡುಪಿಯ ಶ್ರೀಕೃಷ್ಣಮಠ, ಆದಿಚುಂಚನಗಿರಿಯ ಮಠ ಇತ್ಯಾದಿಗಳಲ್ಲೂ ಇಷ್ಟದೇವತಾರ್ಚನೆಯ ಜೊತೆಗೆ ಪೂರ್ವದ ಸ್ವಾಮಿಗಳ ಸಮಾಧಿಗೆ ಪೂಜೆ ಸಲ್ಲುತ್ತದೆ. ಇವುಗಳೆಲ್ಲ ಮಠದ ಆವರಣದಲ್ಲೇ ಇರುತ್ತವೆ. ಪ್ರತಿಮಠದಲ್ಲೂ ಸಾಮಾನ್ಯವಾಗಿ ಪೀಠಾಧ್ಯಕ್ಷರೇ ಪೂಜೆ ಸಲ್ಲಿಸುತ್ತಾರೆ. ಸಾಮಾನ್ಯವಾಗಿ ಮಠಾಧಿಪತಿಗಳು ಪ್ರವಾಸದ ಕಾಲದಲ್ಲಿ ತಮ್ಮ ಇಷ್ಟದೇವತಾ ವಿಗ್ರಹಗಳನ್ನು ಸಂಗಡವೇ ಒಯ್ಯುತ್ತಾರೆ.

	ಮಠಾಧಿಪತಿಯ ಮುಖ್ಯ ಕೆಲಸ ಜ್ಞಾನಾನ್ವೇಷಣೆ ಮತ್ತು ಜ್ಞಾನಪ್ರಸಾರ. ಇದಕ್ಕಾಗಿ ಸ್ವಾಧ್ಯಾಯ, ಶ್ರವಣ, ಮನನ ಮತ್ತು ನಿಧಿಧ್ಯಾಸನ ಮೊದಲ ಹಂತಗಳು. ಆಮೇಲೆ ತೀವ್ರ ತಪಸ್ಸು ಲೌಕಿಕ ವ್ಯವಹಾರಗಳನ್ನೆಲ್ಲ ಬಿಟ್ಟ ಸಮಾಧಿಸ್ಥಿತಿ. ಗಹನವಾದ ತಾತ್ತ್ವಿಕ ವಿಚಾರಗಳ ಅನ್ವೇಷಣೆ. ಆರ್ಜನೆ ಅಂತರ್ಮುಖಿಯಾದಾಗ ಮಾತ್ರ ಸಾಧ್ಯ. ಇಂಥ ಅಲೌಕಿಕ ಉದ್ದೇಶಕ್ಕೆ ಪಾತಂಜಲ ಯೋಗಸೂತ್ರಗಳಲ್ಲಿ ಹೇಳಿರುವ ಅಷ್ಟಾಂಗಯೋಗ ಮುಖ್ಯಮಾರ್ಗ. ಈ ಸ್ಥಿತಿಯನ್ನು ಸಿದ್ಧಿಸಿಕೊಂಡವರು ಮತ್ತೆ ಬಹಿರ್ಮುಖರಾಗಿ ಲೌಕಿಕಕ್ಕೆ ಹಿಂತಿರುಗಿ ಬೋಧನೆ ಪ್ರವಚನಾದಿಗಳಿಂದ ಆ ಜ್ಞಾನವನ್ನು ಸತ್ಪಾತ್ರರಾದ ಶಿಷ್ಯರಿಗೆ ಪ್ರದಾನ ಮಾಡಬೇಕಾಗುತ್ತದೆ.

	ಮಠಾಧಿಪತಿಗೆ ಸಹಾಯಮಾಡಲು ಉತ್ತರಾಧಿಕಾರಿ, ಚರಮೂರ್ತಿ, ಪ್ರತಿನಿಧಿಗಳು ಇರುತ್ತಾರೆ. ಉತ್ತರಾಧಿಕಾರಿಯ ಆಯ್ಕೆ ಸ್ವಾಮಿಗಳಿಗೆ ಸೇರಿದ್ದರೂ ಕೆಲವು ವೇಳೆ ಚುನಾವಣೆ ಮತ್ತು ಭಕ್ತಾದಿಗಳ ಇಷ್ಟದಂತೆ ಪಡೆದಿರುವುದೂ ಉಂಟು. ಕೆಲವು ವೀರಶೈವ ಮಠಗಳಲ್ಲಿ (ಪಟ್ಟದ ಮಠಗಳು) ವಂಶಪಾರಂಪರ್ಯವಾಗಿ ಉತ್ತರಾಧಿಕಾರಿಗಳಾಗುತ್ತಾರೆ. ಮಠದ ಸ್ವಾಮಿ ಸಾಮಾನ್ಯವಾಗಿ ವಿರಕ್ತ, ಬ್ರಹ್ಮಚಾರಿ. ಆದರೆ ಕೆಲವು ಮಠಗಳಲ್ಲಿ ಗೃಹಸ್ಥರೂ ಸಂನ್ಯಾಸಿಗಳಾಗಿ ಸ್ವಾಮಿಗಳಾಗಿದ್ದಾರೆ.

	ಮಠಾಧಿಪತಿ ಮರಣಿಸಿದಾಗ ಅವರ ಉತ್ತರಕ್ರಿಯೆಯಲ್ಲೂ ವೈಶಿಷ್ಟ್ಯವಿದೆ. ಅವರ ಶರೀರವನ್ನು ಸಾಮಾನ್ಯವಾಗಿ ಹೂಳಿಬಿಡುತ್ತಾರೆ. ವೈದಿಕ ಹಾಗೂ ವೀರಶೈವ ಪಂಥಗಳಲ್ಲಿ ಕುಳಿ ತೋಡಿ, ತತ್ಕಾಲಕ್ಕಾಗಿ ಹೊಲಿದ ಹೊಸ ವಸ್ತ್ರಗಳ ಚೀಲಗಳಲ್ಲಿ ಸ್ವಾಮಿಗಳ ಶರೀರವನ್ನಿಟ್ಟು ಅದರೊಡನೆ ವಿಭೂತಿ, ತುಲಸಿ, ಬಿಲ್ವಪತ್ರೆ, ಇತ್ಯಾದಿ ವಸ್ತುಗಳನ್ನಿಟ್ಟು ಅವರು ಕುಳಿಯಲ್ಲಿ ಕುಳಿತಿರುವಂತೆ ಸ್ಥಾಪಿಸಿರುತ್ತಾರೆ. ಕೆಲವು ಪಂಥಗಳಲ್ಲಿ ತೆಂಗಿನಕಾಯಿ ಇತ್ಯಾದಿಗಳಿಂದ ಅವರ ತಲೆಯ ಮೇಲ್ಭಾಗವನ್ನು (ಬ್ರಹ್ಮರಂಧ್ರ) ಘಾಸಿಗೊಳಿಸಿದುಂಟು. ಕುಳಿಮುಚ್ಚಿ ಅದರ ಮೇಲೆ ಬೃಂದಾವನ, ಗದ್ದುಗೆ ಇಲ್ಲವೇ ಸಮಾಧಿಯನ್ನು ಕಟ್ಟಿ ಅದನ್ನು ಪೂಜಾ ಸ್ಥಳವಾಗಿ ಮಾಡುತ್ತಾರೆ.

	ಮಠಗಳು ಪ್ರಥಮತಃ ಅಧ್ಯಾತ್ಮ ಕೇಂದ್ರಗಳು. ಧರ್ಮ ಬೋಧನೆ ಹಾಗೂ ಧರ್ಮ ಪ್ರಸಾರ ಆ ಕೇಂದ್ರಗಳ ಮುಖ್ಯ ಕೆಲಸ. ಜೊತೆಗೆ ಇವು ಸ್ವಪಂಥದ ಕೇಂದ್ರಸ್ಥಾನಗಳೂ ಆಗಿದ್ದು ಸಾಕಷ್ಟು ಶಿಷ್ಯ ಸಂಪತ್ತು ಪಡೆದಿರುತ್ತವೆ. 

	ಈ ಮಠಗಳಿಗೆ ನಡೆದುಕೊಳ್ಳುವ ಶಿಷ್ಯವರ್ಗಕ್ಕೆ ಆ ಮಠಾಧಿಪತಿಗಳ ತೀರ್ಮಾನಗಳು ಎಲ್ಲ ಧಾರ್ಮಿಕ ಲೌಕಿಕ ವ್ಯವಹಾರಗಳಲ್ಲಿ ಪರಮ ಗಣ್ಯವಾಗಿರುತ್ತವೆ. ಮಠಗಳ ಶಿಷ್ಯ ವ್ಯಾಪ್ತಿ ಆಯಾ ಪಂಥ ಜಾತಿಗಳಿಗೆ ಸಂಬಂಧಿಸಿದಂತೆ ಇರುತ್ತದೆ. ಅಪರೂಪವಾಗಿ ಸೀಮಿತ ಭೌಗೋಳಿಕ ವ್ಯಾಪ್ತಿ ಇರುವುದು ಉಂಟು. ಈಗಿನ ಅನೇಕ ಮಠಗಳು ಧರ್ಮ ಪ್ರಚಾರ ಕಾರ್ಯ ಮಾತ್ರವಲ್ಲದೆ ವಿದ್ಯಾ ಪ್ರಸಾರ ಇತ್ಯಾದಿ ಸಮಾಜ ಕಲ್ಯಾಣ ಕಾರ್ಯಗಳಲ್ಲಿಯೂ ಆಸಕ್ತಿ ವಹಿಸುತ್ತಿವೆ.

	ಕರ್ನಾಟಕದಲ್ಲಿ ನಾನಾ ಮತ-ಪಂಥಗಳಿಗೆ ಸಹಸ್ರಾರು ಮಠಗಳು ಇವೆ. ಅನೇಕ ಮಠಗಳು ಹಿಂದಿನ ರಾಜರು ಹಾಗೂ ಶ್ರೀಮಂತರಿಂದ ಪೋಷಿತಗೊಂಡೊ ಶಿಷ್ಯ ಸಮೂಹದ ನೆರವಿನಿಂದಲೊ ಸಾಕಷ್ಟು ಚಿರ-ಸ್ಥಿರ ಆಸ್ತಿಯನ್ನು ಹೊಂದಿವೆ.

	ಕರ್ನಾಟಕದಲ್ಲಿ ಪ್ರಸಿದ್ಧವಾಗಿರುವ ಕೆಲವು ಮಠಗಳನ್ನು ಇಲ್ಲಿ ಹೆಸರಿಸಬಹುದು. ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿಯಲ್ಲಿರುವ ಆದಿಚುಂಚನಗಿರಿ ಮಹಾಸಂಸ್ಥಾನ ಪ್ರಾಚೀನ ಮಠಗಳಲ್ಲೊಂದು. ಇದರ ಗುರುಪರಂಪರೆಯ ಪ್ರಕಾರ ಈಗಿರುವ ಸ್ವಾಮಿಗಳು ಎಪ್ಪತೊಂದನೆಯವರು. ಈ ಮಠಕ್ಕೆ ಸಂಬಂಧಿಸಿದ ಸ್ಥಳಾಧಿದೇವತೆ ಭೈರವೇಶ್ವರ, ಗಂಗಾಧರೇಶ್ವರ ಆರ್ಚಾಧಿದೇವತೆ, ಹರಿಜನರು ಒಕ್ಕಲಿಗರು, ಲಿಂಗಾಯಿತರು, ಮಹಮ್ಮದೀಯರು, ನೇಕಾರರು ಇತ್ಯಾದಿ ಇಲ್ಲಿಯ ಭಕ್ತಸಮೂಹ. ಈ ಮಠ ಒಂದು ಪ್ರಥಮ ದರ್ಜೆ ಕಾಲೇಜು ಪ್ರೌಢಶಾಲೆ ಸಂಸ್ಕøತ ಮಹಾಪಾಠ ಶಾಲೆಗಳನ್ನು ನಡೆಸುತ್ತಿದೆ. ಅಲ್ಲದೇ ಸುಮಾರು ಐದುನೂರು ಜನ ವಿದ್ಯಾರ್ಥಿಗಳಿಗೆ ಅನ್ನದಾನ ನಡೆಸುತ್ತಿದೆ. ಶಿವಮೊಗ್ಗ ಜಿಲ್ಲೆಯ ಹುಮಚದ ಜೈನಮಠ ಎಂಟನೆಯ ಶತಮಾನದಲ್ಲಿ ಜಿನದತ್ತರಾಯನೆಂಬವ ಸ್ಥಾಪಿಸಿದ್ದೆಂದು ಪ್ರತೀತಿ. ಇಲ್ಲಿಯ ಸ್ವಾಮಿಗಳಿಗೆ ದೇವೇಂದ್ರ ಕೀರ್ತಿ ಭಟ್ಟಾಕರಕೆಂಬ ನಾಮಾಂಕಿತವಿದೆ. ಈಗಿನ ಶ್ರವಣಬೆಳಗೊಳದ ಮಠವನ್ನು ಗಂಗರಸರ ಮಂತ್ರಿ ಚಾವುಂಡರಾಯ 983ರಲ್ಲಿ ಸ್ಥಾಪಿಸಿದ. 1117ರಿಂದ ಇಲ್ಲಿಯ ಪೀಠಾಧಿಕಾರಿಗಳಿಗೆ ಚಾರುಕೀರ್ತಿ ಪಂಡಿತಾಚಾರ್ಯರೆಂಬ ಹೆಸರಿದೆ. ಶಂಕರಾಚಾರ್ಯರು ಭಾರತದ ನಾಲ್ಕು ಮೂಲೆಗಳಲ್ಲೂ ಸ್ಥಾಪಿಸಿದ ನಾಲ್ಕು ಪ್ರಸಿದ್ಧ ಪೀಠಗಳಲ್ಲಿ ಶೃಂಗೇರಿ ಶಾರದಾ ಪೀಠವೂ ಒಂದು. ಸುಮಾರು 834ರಲ್ಲಿ ಸ್ಥಾಪಿಸಿದ ಈ ಮಠದಲ್ಲಿ ಈಗಿನ ಹಿರಿಯಸ್ವಾಮಿಗಳು ಮೂವತ್ತೆರಡನೆಯವರು ಈ ಮಠಕ್ಕೆ ವಿಜಯನಗರ, ಕೆಳದಿಯ ಅರಸರು, ಹೈದರ್, ಟಿಪ್ಪು ಹಾಗೂ ಮೈಸೂರಿನ ಒಡೆಯರು ರಾಜಾಶ್ರಯವಿತ್ತಿದ್ದರು. ಇದರ ಶಾಖೋಪಶಾಖೆಗಳು ಕರ್ನಾಟಕದ ಹಾಗೂ ಭಾರತದ ನಾನಾ ತೀರ್ಥಕ್ಷೇತ್ರಗಳಲ್ಲಿ ಮತ್ತು ನಗರಗಳಲ್ಲಿ ಇವೆ; ಶೃಂಗೇರಿಯಲ್ಲಿ ಸಂಸ್ಕøತ ಕಾಲೇಜು, ವಿದ್ಯಾರ್ಥಿನಿಲಯ ಇತ್ಯಾದಿಗಳಿವೆ. ಈ ಮಠಕ್ಕೆ ಸೇರಿದಂತೆ ಶಾರದಾಂಬ, ಚಂದ್ರಮೌಳೇಶ್ವರ, ಗಣಪತಿ ಮೊದಲಾದ ದೇವಾಲಯಗಳಿವೆ. ಇಲ್ಲಿಯ ಸ್ವಾಮಿಗಳೆಲ್ಲ ವೇದಾಂತ ಶಾಲೆಯಲ್ಲಿ ಪ್ರಕಾಂಡ ಪಂಡಿತರೂ ಗ್ರಂಥಕರ್ತರೂ ತಪಸ್ವಿಗಳೂ ಆಗಿದ್ದವರು. ಅಖಿಲ ಭಾರತ ವ್ಯಾಪ್ತಿಯಿರುವ ಮಠಗಳಲ್ಲಿ ಇದಕ್ಕೆ ಪ್ರಥಮಸ್ಥಾನವಿದೆ. ಶ್ರೀವೈಷ್ಣವರ ಮಠಗಳಲ್ಲಿ ಮೈಸೂರು ನಗರದ ಬ್ರಹ್ಮತಂತ್ರ ಸ್ವತಂತ್ರ ಪರಕಾಲ ಮಠ ಪ್ರಸಿದ್ಧವಾದುದು. ಯದುರಾಯರ ಮತ್ತು ಕೃಷ್ಣರಾಯರ ಕಾಲದಲ್ಲಿ ಶ್ರೀರಂಗಪಟ್ಟಣದ ಹತ್ತಿರ ಸ್ಥಾಪಿತವಾಗಿ ಇತ್ತೀಚೆಗೆ ಮೈಸೂರಿಗೆ ವರ್ಗವಾಯಿತು. ಈ ಮಠದ ಯತಿಗಳು ಮೈಸೂರು ಒಡೆಯರಿಗೆ ದೀಕ್ಷಾ ಗುರುಗಳು. ಇದರ ಚಟುವಟಿಕೆಗಳು ತತ್ತ್ವಾನ್ವೇಷಣೆ, ಗ್ರಂಥರಚನೆ, ಮತಪ್ರಚಾರ, ಧಾರ್ಮಿಕ ಪ್ರವಾಸ, ಶಿಷ್ಯರಿಗೆ ದರ್ಶನ ಇತ್ಯಾದಿಗಳಿಗೆ ಸೀಮಿತವಾಗಿದೆ. ಮೈಸೂರಿನ ಮುಖ್ಯಮಠದಲ್ಲಿ ಶ್ರೀವೈಷ್ಣವ ವಿದ್ಯಾರ್ಥಿಗಳಿಗೆ ಅನ್ನದಾನ, ಸಂಸ್ಕøತಾಭ್ಯಾಸ, ಪಂಡಿತರಿಗೆ ಪ್ರೋತ್ಸಾಹ ಇತ್ಯಾದಿಗಳೂ ನಡೆಯುತ್ತವೆ. ಲಕ್ಷ್ಮೀಹಯಾಸ್ಯ ಇಲ್ಲಿಯ ಆರಾಧ್ಯದೇವತೆ. ಹದಿಮೂರನೆಯ ಶತಮಾನದಲ್ಲಿ ಮಧ್ವಾಚಾರ್ಯರು ಉಡುಪಿಯಲ್ಲಿ ಶ್ರೀಕೃಷ್ಣ ಮಠವನ್ನು ಸ್ಥಾಪಿಸಿದರು. ಮಧ್ವಾಚಾರ್ಯರಿಗೆ ಮಲ್ಪೆಯ ಸಮುದ್ರದ ಹತ್ತಿರ ಮುಳುಗಡೆಯಾಗಿ ನಿಂತಿದ್ದ ಹಡಗೊಂದರಲ್ಲಿ ಕೃಷ್ಣ ವಿಗ್ರಹ ದೊರೆಯಿತೆಂದೂ ಅದನ್ನು ಈಗಿರುವ ಮಂದಿರದಲ್ಲಿ ಸ್ಥಾಪಿಸಿದರೆಂದೂ ಐತಿಹ್ಯವಿದೆ. ಉಡುಪಿಯಲ್ಲಿರುವ ಕೇಂದ್ರಮಠಕ್ಕೆ ಎಂಟು ಬೇರೆ ಬೇರೆ ಮಠಗಳಿದ್ದು ಅವುಗಳೆಲ್ಲಕ್ಕೂ ಪರ್ಯಾಯವಾಗಿ (ಸರದಿ) ಎರಡು ವರ್ಷಕ್ಕೊಮ್ಮೆ ಕೃಷ್ಣಪೂಜೆಯ ಜವಾಬ್ದಾರಿಯಿದೆ. ಮಾಧ್ವ ಪಂಥಕ್ಕೆ ಸಂಬಂಧಿಸಿದಂತೆ ಸೋಸಲೆ, ನಂಜನಗೂಡು, ಹೊಸಪೇಟೆ (ಉತ್ತರಾದಿ) ಮತ್ತು ಮಂತ್ರಾಲಯ (ಆಂಧ್ರಪ್ರದೇಶ) ಇಲ್ಲಿಯ ಮಠಗಳೂ ಪ್ರಸಿದ್ಧವಾಗಿವೆ. 

	ಬಸವೇಶ್ವರರ ಕಾಲದಲ್ಲಿ ಕಲ್ಯಾಣದಲ್ಲಿದ್ದ ಅನುಭವಮಂಟಪ ವೀರಶೈವ ಮಠಗಳಿಗೆ ಮೊದಲ ಚಿಲುಮೆ. ವೀರಶೈವ ಧಾರ್ಮಿಕ ಕ್ರಾಂತಿ ರಾಜಕೀಯ ಆಂದೋಳನಕ್ಕೆ ಕಾರಣವಾಗಿ ಅನೇಕ ಶರಣರು ಕಲ್ಯಾಣ ಬಿಟ್ಟರು. ಇಂಥ ಮೂರು ಸಾವಿರ ಶರಣರು ಮಾಡಿಕೊಂಡ ಧಾರ್ಮಿಕಕೇಂದ್ರ ಈಗಿನ ಹುಬ್ಬಳ್ಳಿಯ ಮೂರು ಸಾವಿರ ಮಠವಾಯಿತೆನ್ನಲಾಗಿದೆ. ಚಿತ್ರದುರ್ಗದ ಚಿನ್ಮೂಲಾದ್ರಿ ಬೃಹನ್ಮಠ ಮೊದಲಿಗೆ ಚರಮಠವಾಗಿದ್ದದು ಚಿತ್ರದುರ್ಗದ ಭರಮ ನಾಯಕನ ಕಾಲದಲ್ಲಿ ಪ್ರೋತ್ಸಾಹ ಸಿಕ್ಕಿ ಅಲ್ಲಿ ನೆಲೆಯಾಗಿ ನಿಂತಿತು ಎನ್ನಲಾಗಿದೆ. ಇಮ್ಮಡಿ ಮುರುಘ ರಾಜೇಂದ್ರ ಸ್ವಾಮಿಗಳು ಮಹಾಮಹಿಮಾವಂತರಾಗಿ ಆತನ ಶ್ರೇಯಸ್ಸಿಗೆ ಕಾರಣರಾದರೆನ್ನಬಹುದು. ಇದರ ನೂರಾರು ಶಾಖೆಗಳು ಕರ್ನಾಟಕಾದ್ಯಂತ ಹರಡಿವೆ. ಅದರಲ್ಲಿ ಬಹಳಷ್ಟು ಶಾಖೆಗಳು ಉತ್ತರ ಕರ್ನಾಟಕದಲ್ಲಿವೆ. ಈ ಮಠ ಅನೇಕ ಸ್ಥಳಗಳಲ್ಲಿ ಕಾಲೇಜು, ಪ್ರೌಢಶಾಲೆ, ವಿದ್ಯಾರ್ಥಿನಿಲಯ ಇತ್ಯಾದಿಗಳನ್ನು ಸ್ಥಾಪಿಸಿದೆ. ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆ ಮಠವೂ ಅನ್ನದಾಸೋಹ, ಜ್ಞಾನದಾಸೋಹಗಳಲ್ಲಿ ಚಟುವಟಿಕೆಯಿಂದ ಕಾರ್ಯೋನ್ಮುಖವಾಗಿದೆ. ಇತ್ತೀಚಿನ ಕೆಲವು ದಶಕಗಳಲ್ಲಿ ಪೀಠ ಅಸಾಧಾರಣ ಪ್ರಗತಿ ಸಾಧಿಸಿದೆ. ಇದರ ಮೂಲ ಸ್ಥಾಪಕ ವಿಶ್ವಬಂಧು ಮರುಳಸಿದ್ದರು. ಇವರು ದಲಿತವರ್ಗದಿಂದ ಮೇಲೆ ಬಂದು ದಲಿತೋದ್ಧಾರಕ್ಕಾಗಿ ಕಷ್ಟದ ಪರಂಪರೆಯನ್ನೇ ಎದುರು ಹಾಕಿಕೊಂಡು ಸೆಣಸಿ ಕ್ರಾಂತಿ ಪುರುಷನಾದ ಧೀಮಂತರು. ಐತಿಹ್ಯದ ಪ್ರಕಾರ ಚಿತ್ರದುರ್ಗದ ಚಿನ್ಮೂಲಾದ್ರಿಯಲ್ಲಿದ್ದ ರೇವಣಸಿದ್ಧೇಶ್ವರರ ಅನುಗ್ರಹ ಪಡೆದು, ಹಂಪೆಗೆ ದಕ್ಷಿಣದಲ್ಲಿದ್ದ ಕಗ್ಗಲ್ಲುಪುರದಲ್ಲಿ ತನ್ನ ಸಾಕು ತಂದೆ ಪಾಳೆಯಗಾರ ಬಾಚಿಗೌಡನಿಂದ ಸ್ವಲ್ಪ ಜಮೀನು ಪಡೆದು ಉಜ್ಜಯಿನೀ ಸದ್ಧರ್ಮಪೀಠವೆಂಬ ಮಠ ಸ್ಥಾಪಿಸಿದರು. ತನ್ನ ಪ್ರಿಯಶಿಷ್ಯ ತೆಲುಗುಬಾಳಿನ ಸಿದ್ಧರಾಮನಿಗೆ "ತರಳ ಬಾಳು" ಎಂದು ಹರಸಿ ಉತ್ತರಾಧಿಕಾರವನ್ನು ವಹಿಸಿದರು. ಕಾಲಾಂತರದಲ್ಲಿ ಇದು ಈಗಿರುವ ಸಿರಿಗೆರೆಗೆ ವರ್ಗವಾಯಿತು. ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಈ ಮಠದ ಪ್ರಭಾವ ವ್ಯಾಪಕವಾಗಿದೆ. ಇಂದು ಸುಮಾರು 50ಕ್ಕೂ ಹೆಚ್ಚು ಪ್ರೌಢಶಾಲೆಗಳು, ವಿದ್ಯಾರ್ಥಿನಿಲಯಗಳು, ಐದು ಸಂಸ್ಕøತ ಪಾಠಶಾಲೆಗಳು, ಮೂರು ಪ್ರಥಮ ದರ್ಜೆ ಕಾಲೇಜು, ಒಂದು ಉಪಾಧ್ಯಾಯ ತರಬೇತಿ ಕಾಲೇಜು ಇತ್ಯಾದಿಗಳು ಈ ಮಠದ ವತಿಯಿಂದ ನಡೆಯುತ್ತಿವೆ. ತುಮಕೂರಿಗೆ ಸುಮಾರು 6 ಕಿಮೀ ದೂರದ ಕ್ಯಾತಸಂದ್ರದ ಬಳಿಯ ಸಿದ್ಧಗಂಗಾಮಠ ಮತ್ತೊಂದು ಪ್ರಸಿದ್ಧ ವೀರಶೈವ ಪೀಠ. 1935ರಿಂದ ಸಂಸ್ಕøತ ಪಾಠ, ಉಚಿತ ಅನ್ನದಾಸೋಹ ನಡೆಯಲು ಪ್ರಾರಂಭವಾಗಿ ಇಂದು ಬೃಹತ್ತಾಗಿ ಬೆಳೆದು ಜನಾದರಣೆ ಗಳಿಸಿದೆ. ಸಿದ್ಧಗಂಗಾಮಠದ ಆವರಣದಲ್ಲೇ ಒಂದು ವೇದ ಪಾಠಶಾಲೆ, ಸಂಸ್ಕøತ ಕಾಲೇಜು, ಪ್ರೌಢಶಾಲೆ ಇವೆ. ತುಮಕೂರಿನಲ್ಲಿ ಸಿದ್ಧಗಂಗಾ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸಿದ್ಧಗಂಗಾ ಪ್ರಥಮ ದರ್ಜೆ ಕಾಲೇಜು, ಸಂಜೆ ಕಾಲೇಜು ಇತ್ಯಾದಿಗಳೂ ಮಾಗಡಿ ಸಿರಾ, ದೊಡ್ಡಬಳ್ಳಾಪುರ ಮುಂತಾದ ಕಡೆಗಳಲ್ಲಿ ಪ್ರೌಢಶಾಲೆಗಳೂ ಪ್ರಸಾದ ನಿಲಯಗಳೂ ಈ ಮಠದಿಂದ ಸ್ಥಾಪಿತವಾಗಿವೆ. ಸುಮಾರು 4000ಕ್ಕೂ ಮಿಕ್ಕಿದ ಎಲ್ಲ ಕೋಮಿನವರೂ ಈ ಮಠದಲ್ಲಿ ಆಶ್ರಯ ಪಡೆದು ಅನ್ನ-ವಸತಿ ಪಡೆಯುತ್ತಿದ್ದಾರೆ. ನಂಜನಗೂಡು ತಾಲ್ಲೂಕು ಸುತ್ತೂರು ಮತ್ತೊಂದು ಪ್ರಸಿದ್ಧ ವೀರಶೈವ ಪೀಠದ ಕೇಂದ್ರ. ಇಲ್ಲಿಯ ಮಠಕ್ಕೆ ಸುಮಾರು 700 ವರ್ಷಗಳ ಇತಿಹಾಸವಿದೆ. ಅನೇಕ ಸಿದ್ಧ ಪುರುಷರು ಈ ಗುರುಪರಂಪರೆಯಲ್ಲಿ ಆಗಿ ಹೋಗಿದ್ದಾರೆ. ಸದ್ಯಕ್ಕೆ ಈ ಮಠದ ಪ್ರಮುಖ ಕೇಂದ್ರ ಮೈಸೂರು ನಗರ. ಈ ಮಠದ ವತಿಯಿಂದ ಶಿವರಾತ್ರೀಶ್ವರರ ಹೆಸರಿನಲ್ಲಿ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿ ಒಂದು ಎಂಜಿನಿಯರಿಂಗ್ ಕಾಲೇಜು, ಒಂದು ವೈದ್ಯಕೀಯ ಕಾಲೇಜು, ಮೂರು ಪ್ರಥಮ ದರ್ಜೆ ಕಾಲೇಜುಗಳು, ಉಪಾಧ್ಯಾಯ ಶಿಕ್ಷಣ ಕಾಲೇಜು, ಅನೇಕ ವಿದ್ಯಾರ್ಥಿ ನಿಲಯಗಳು ನಡೆಯುತ್ತಿವೆ. ಸಂಖ್ಯೆಯಲ್ಲಿ ವೀರಶೈವ ಮಠಗಳು ಇತರ ಎಲ್ಲಾ ಮಠಗಳಿಗೂ ಮಿಗಿಲಾಗಿದೆ. ಕೆಲವಂತೂ ತಮ್ಮ ತಮ್ಮ ಚಟುವಟಿಕೆಗಳಲ್ಲಿ ಪ್ರಸಿದ್ಧವಾಗಿವೆ. ಬೆಟ್ಟದಪುರ, ರಂಭಾಪುರಿ, ನಿಡುಮಾಮಿಡಿ, ಧಾರವಾಡ, ಹುಬ್ಬಳ್ಳಿ, ಬೆಂಗಳೂರು ನಗರದಲ್ಲಿರುವ ಅನೇಕ ಮಠಗಳೂ ಸಹ ಅನ್ನ ದಾಸೋಹ ಜ್ಞಾನ ದಾಸೋಹ ನಡೆಸುತ್ತಿವೆ. ಉತ್ತರ ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲೂ ಸಹ ಚಿಕ್ಕ ಪುಟ್ಟ ಮಠಗಳನ್ನು ಯಥೋಚಿತವಾಗಿ ಕಾರ್ಯೋನ್ಮುಖವಾಗಿವೆ.

	19ನೆಯ ಶತಮಾನದಿಂದ ಲಂಡನ್ ಮಿಷನ್, ಬಾಸೆಲ್ ಮಿಷನ್, ಮೆತಾಡಿಸ್ಟ್ ಮಿಷನ್, ವೆಸ್ಲಿಯನ್ ಮಿಷನ್, ಚರ್ಚ್ ಆಫ್ ಸೌತ್ ಇಂಡಿಯಾ ಕ್ರೈಸ್ತ ಮಠಗಳು ವ್ಯವಸ್ಥಿತವಾಗಿ ಧರ್ಮಪ್ರಚಾರ ಮತ್ತು ಸಾರ್ವಜನಿಕ ಸೇವೆಯನ್ನು ಮಾಡುತ್ತಿವೆ.
(ನೋಡಿ- ಕ್ರೈಸ್ತ-ಧರ್ಮ)

	ರಾಮಕೃಷ್ಣ ಮಿಷನ್ ಮೈಸೂರು, ಮಂಗಳೂರು, ಬೆಂಗಳೂರುಗಳಲ್ಲಿ ಕಾರ್ಯೋನ್ಮುಖವಾಗಿದೆ. ಅಖಿಲ ಭಾರತ ಮಟ್ಟದ ವೇದಾಂತ ಮಹಾವಿದ್ಯಾಲಯ, ಕಾಲೇಜು, ವಿದ್ಯಾರ್ಥಿನಿಲಯಗಳನ್ನು ಮೈಸೂರಿನಲ್ಲಿ ನಡೆಸುತ್ತಿದೆ. ಆರ್ಯಸಮಾಜವೂ ತಕ್ಕ ಮಟ್ಟಿಗೆ ಬೆಂಗಳೂರು ಮೈಸೂರು ಮಂಗಳೂರುಗಳಲ್ಲಿ ಸಕ್ರಿಯ ಪಾತ್ರ ವಹಿಸಿತ್ತು. ಕೆಂಗೇರಿಯ ಗುರುಕುಲ ಆರ್ಯಸಮಾಜದ ಮೂಲವೆನ್ನಬೇಕು. ಚುಂಚನಕಟ್ಟೆಯ ಗುರುರಾಮ ಮಿಷನ್ (ಸೇವಾ ಸಮಿತಿ) ಗುರುಕುಲವೂ ಆರ್ಯಸಮಾಜದ ಕೆಲವು ಉದ್ದೇಶಗಳನ್ನು ಅಳವಡಿಸಿಕೊಂಡಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ